ಅಳಿಲು ಮೀನು
ಹವಳದ ಗುಡ್ಡಗಳಲ್ಲಿ ವಾಸಿಸುವ ಉಷ್ಣವಲಯದ ಸಮುದ್ರದ ಮೀನು (ಸಿಪಾಯಿ ಮೀನು). ವೈಜ್ಞಾನಿಕ ಹೆಸರು ಸಾರ್ಗೋಸೆಂಟ್ರಾನ್ ಈ ಮೀನುಗಳ ದೇಹದ ಮೇಲೆ ಹೊಳಪಾದ ಕೆಂಪು ಮತ್ತು ಹಳದಿ ಬಣ್ಣಗಳ ಉದ್ದವಾದ ಪಟ್ಟೆಗಳು ಪ್ರಮುಖವಾಗಿ ಕಾಣಬರುತ್ತವೆ.  ಇದು ಸುಮಾರು 18 ಸೆಂ.ಮೀ ಉದ್ದ ಬೆಳೆಯುತ್ತದೆ.  ಹೋಲೋಸೆಂಟ್ರಿಡೇ ಕುಟುಂಬಕ್ಕೆ ಸೇರಿದ ಈ ಮೀನುಗಳಲ್ಲಿ ಕಿವಿರು ಕವಚ, ಮೂಳೆಯ ಕೆಳಗೆ ಹಿಂಚಾಚಿದಂತೆ ಒಂದು ಬಲವಾದ ಕಂಟಕವಿದೆ.  ಬೆನ್ನಿನ ಮೇಲೆ ಎರಡು ಈಜುರೆಕ್ಕೆಗಳಿವೆ. ಬಾಲದ ಈಜು ರೆಕ್ಕೆ ಕವಲೊಡೆದಿದೆ. ದೇಹದ ಮೇಲೆ ಬಿರುಸಾದ ಸುಮಾರು ದೊಡ್ಡ ಹುರುಪೆಗಳಿವೆ.  ಮೈಮೇಲಿನ ಪಟ್ಟೆ ಮತ್ತು ದೊಡ್ಡ ಅಳಿಲು ಕಣ್ಣುಗಳಿಂದ ಈ ಮೀನುಗಳಿಗೆ ಅಳಿಲು ಮೀನುಗಳೆಂದು ಹೆಸರು ಬಂದಂತೆ ಕಾಣುತ್ತದೆ.

ಇಂಡೋನೇಷಿಯಾ, ಹವಾಯ್ ಮತ್ತು ಪಶ್ಚಿಮ ಇಂಡೀಸ್ ಸುತ್ತಲಿನ ಸಮುದ್ರಗಳಲ್ಲಿ ವಾಸಿಸುವ ಈ ಮೀನುಗಳು ಸುಮಾರು 70 ಜಾತಿಗಳಿವೆ.
(ಸಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ